ಗಂಗಾ ಯಮುನಾ ನದಿಗಳ ನಡುವಿನ ಪ್ರದೇಶ. ಔದ್ ಅಥವಾ ಅಯೋಧ್ಯೆ ಇಂದಿನ ಉತ್ತರ ಪ್ರದೇಶದ ಒಂದು ಭಾಗ. ಪ್ರಾಚೀನ ಭಾರತದಲ್ಲಿ ಕೋಸಲವೆಂಬ ಹೆಸರಿತ್ತು. ರಾಜಧಾನಿ ಅಯೋಧ್ಯೆ . 1857ರ ಬಂಡಾಯದಲ್ಲಿ ಹೆಸರು ಪಡೆದ ಸಂಸ್ಥಾನವಿದು. ಮೊಗಲರ ಅವನತಿಯ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿ ನವಾಬರ ಅಧೀನವಾಯಿತು. ಇವರ ಕಾಲದಲ್ಲಿ ಷಿಯ ಪಂಥ ಊರ್ಜಿತವಾಯಿತು. ಸಾದತ್ಖಾನ್, ಸಫ್ದರ್ಜಂಗ್, ಸೂಜಾಉದ್ದೌಲರು ಪ್ರಸಿದ್ಧ ನವಾಬರು. ದಿಲ್ಲಿ ಸಾಮ್ರಾಟನ ವಜೀರನಾಗಿದ್ದ ನಿಜಾಂ ಉಲ್ ಮುಲ್ಕನ ಮರಣಾನಂತರ ಸಫ್ದರ್ಜಂಗ್ ಸಾಮ್ರಾಟನ ಮೊದಲನೆಯ ವಜೀರನಾದ. ಅವನ ಕಾಲದಲ್ಲಿ ಸಂಪತ್ತು ತುಂಬಿ ತುಳುಕುತ್ತಿತ್ತು. ಹಿಂದೂ ಮುಸಲ್ಮಾನರು ರಾಜ್ಯದಲ್ಲಿ ಸಮಾನಾಧಿಕಾರ ಉಳ್ಳವರಾಗಿದ್ದರು. ಸೂಜಾಉದ್ದೌಲನ ಕಾಲದಲ್ಲಿ ಇಂಗ್ಲಿಷರು ರಾಜ್ಯ ವ್ಯವಹಾರದಲ್ಲಿ ಪ್ರವೇಶ ಮಾಡಿದರು. ಅವನ ತರುವಾಯ ಅಸಾಫ್ ಉದ್ದೌಲನೊಡನೆ ಹೊಸ ಒಪ್ಪಂದ ಮಾಡಿಕೊಂಡು ಮೂರು ಲಕ್ಷ ಉತ್ಪನ್ನವುಳ್ಳ ಪ್ರಾಂತ್ಯವನ್ನು ಕಂಪನಿ ಸರಕಾರಕ್ಕೆ ತೆಗೆದುಕೊಂಡ. ವಾರನ್ ಹೇಸ್ಟಿಂಗ್ಸ್‌ ಅವಧದ ಬೇಗಮ್ಮರನ್ನೂ ಚೈತ್ಸಿಂಗನನ್ನೂ ಸುಲಿದು, ಅವರ ಸಂಪತ್ತನ್ನು ದೋಚಿಕೊಂಡನು. ಅಸಾಫ್ ಉದ್ದೌಲನ ಮರಣಾನಂತರ ಇಂಗ್ಲಿಷರು ಉತ್ತರಾಧಿಕಾರದ ಪ್ರಶ್ನೆಯಲ್ಲೂ ಕೈಹಾಕಿದರು. ತಮಗೆ ನಿಷ್ಠಾವಂತರಾದವರನ್ನು ನೇಮಿಸಿದರು. ವಜೀರ ಅಲಿಯನ್ನು ಕಿತ್ತುಹಾಕಿ ಸಾದತ್ ಅಲಿಯನ್ನು ಸಿಂಹಾಸನದ ಮೇಲೆ ಕೂಡಿದರು. ಇದಕ್ಕಾಗಿ ಸಾದತ್ ಅಲಿ 13 ಲಕ್ಷ ರೂಪಾಯಿಗಳನ್ನು ಕಾಣಿಕೆಯಾಗಿ ಕೊಟ್ಟ. ಇಂಗ್ಲಿಷರ ಮಿತ್ರತ್ವವನ್ನು ಸ್ಥಿರಗೊಳಿಸಲು ಬ್ರಿಟಿಷ್ ಸೈನ್ಯದ ಖರ್ಚಿಗಾಗಿ 76 ಲಕ್ಷ ರೂಪಾಯಿಗಳನ್ನು ಕಂಪನಿ ಸರ್ಕಾರಕ್ಕೆ ಕೊಡಬೇಕಾಗಿ ಬಂತು. ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿಯನ್ನು ಹೇರಿದ. ಹಣ ಕೊಡಲಾರದೆ ಹೋದುದರಿಂದ ಸು. 11/2ಕೋಟಿ ಉತ್ಪನ್ನವುಳ್ಳ ರಾಜ್ಯಭಾಗ ಇಂಗ್ಲಿಷರ ಕೈವಶವಾಯಿತು. ಸಾದತ್ ಅಲಿಯ ತರುವಾಯ ಗಾಜಿ ಉದ್ದೀನ್ ಹೈದರ್ ನವಾಬನಾದ. ಮತ್ತೆ ಹೊಸ ಒಪ್ಪಂದ, ಹೊಸ ಕರಾರುಗಳು ಏರ್ಪಟ್ಟುವು. 1827ರಲ್ಲಿ ನಾಸೀರ್ ಉದ್ದೀನ್ ನವಾಬನಾದ. ವಿಷಯ ಲೋಲುಪನಾಗಿದ್ದ ಇವನ ತರುವಾಯ ನಿಜವಾದ ವಾರಸುದಾರನಾದ ಮುನ್ನಾಜಾನನಿಗೆ ಸಿಂಹಾಸನ ಸಿಗಬೇಕಾಗಿತ್ತು. ಆದರೆ ಖಾನಜಹಾನ್ನಲ್ಲಿ ವಿಶ್ವಾಸವನ್ನಿಟ್ಟಿದ್ದ ನಾಸೀರ್ ಉದ್ದೀನ್ ಅವನಿಗೆ ಪಟ್ಟಸಿಗಬೇಕೆಂದು ಬ್ರಿಟಿಷ್ ರೆಸಿಡೆಂಟನಿಗೆ ತಿಳಿಸಿದ್ದ. ಸಮಯ ನಿರೀಕ್ಷಿಸುತ್ತಿದ್ದ ಲಾರ್ಡ್ ಆಕ್ಲೆಂಡ್ ಅವನಿಗೆ ಸಿಂಹಾಸನ ದೊರಕಿಸಿಕೊಟ್ಟು ಹೊಸ ಒಪ್ಪಂದ ಮಾಡಿಕೊಂಡ. ನವಾಬ ಬ್ರಿಟಿಷ್ ರೆಸಿಡೆಂಟನ ಅನುಮತಿಯಿಂದ ಆಡಳಿತವನ್ನು ಸಾಗಿಸಬೇಕು. ಸೈನ್ಯದ ಖರ್ಚಿಗಾಗಿ ಪ್ರತಿವರ್ಷ 16 ಲಕ್ಷ ರೂಪಾಯಿಗಳನ್ನು ಕೊಡಬೇಕೆಂದು ಒಪ್ಪಂದವಾಯಿತು. ಬೇಗಮ್ ತನ್ನ ಮಗ ಮುನ್ನಾಜಾನನ ಪಟ್ಟದ ಸಲುವಾಗಿ ಹೋರಾಡಿ ಸೋತಳು. ಇವನ ಅನಂತರ ಬಂದ ಅಜಮದಲೀಷಹ, ವಾಜೀದಲೀಷಹ ವಿಷಯ ಲೋಲುಪರು, ಆಡಳಿತದ ಬಗ್ಗೆ ಉದಾಸೀನರು. ಇದರಿಂದ ರಾಜ್ಯದಲ್ಲಿ ಅರಾಜಕತೆ ತಲೆದೋರಿತು. ರಾಜ್ಯವನ್ನು ಕಂಪನಿಯ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳಬೇಕೆಂಬ ಧ್ಯೇಯ ಇಂಗ್ಲಿಷರಿಗಿತ್ತು. ಅವಧದ ಭೌಗೋಳಿಕ ಸ್ಥಾನ, ಸಾಮ್ರಾಜ್ಯದ ವಿಸ್ತರಣೆ, ಇದಕ್ಕೆ ಮುಖ್ಯ ಕಾರಣವಾಯಿತು. ಡಾಲ್ಹೌಸಿ ಅವಧವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ. ಇದರಂತೆ 1856 ಫೆಬ್ರವರಿ 4ಕ್ಕೆ ಔದ್ ರಾಜ್ಯ ಕಂಪನಿ ಸರ್ಕಾರದ ಸಾಮ್ರಾಜ್ಯದಲ್ಲಿ ಸೇರಿತು. ನವಾಬ ಪ್ರತಿವರ್ಷ 12 ಲಕ್ಷ ರೂಪಾಯಿ ವಿಶ್ರಾಂತಿ ಧನ ತೆಗೆದುಕೊಂಡು ಜೀವಿಸಬೇಕೆಂದು ಒಪ್ಪಂದವಾಯಿತು. ಇದಕ್ಕೆ ಒಪ್ಪದ್ದರಿಂದ ನವಾಬನನ್ನು ಫೋರ್ಟ್ ವಿಲಿಯಂ ಕೋಟೆಯಲ್ಲಿ ಬಂಧಿಸಲಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ